ದಡಾರ -
	ಇದೊಂದು ತೀವ್ರ ಸ್ವರೂಪದ ವೈರಸ್ ಅಂಟು ಜಾಡ್ಯ (ಮೀಸಲ್ಸ್). ಕೆಮ್ಮು ಮತ್ತು ಸೀನುವುದರಿಂದ ಈ ವೈರಸ್ ರೋಗಿಯಿಂದ ವಾತಾವರಣವನ್ನು ಸೇರಿ, ಉಸಿರಾಟದಿಂದ ಆರೋಗ್ಯವಂತರ ದೇಹದ ಒಳಹೊಕ್ಕು ಒಬ್ಬರಿಂದೊಬ್ಬರಿಗೆ ಸೋಂಕು ಹರಡುತ್ತದೆ.  10 ವರ್ಷಗಳ ಒಳಗಿನ ಮಕ್ಕಳಲ್ಲಿ ಈ ಸೋಂಕು ಹೆಚ್ಚಾಗಿ ಕಂಡು ಬರುವುದು.  ಬಸಿರಿನಲ್ಲಿ ಈ ಜಾಡ್ಯ ತಗಲಿದರೆ ಗರ್ಭಸ್ರಾವವಾಗಬಹುದು. ಹುಟ್ಟಿದ ಮಗುವಿಗೆ ಅಂಟಬಹುದು ಇಲ್ಲವೆ ಮಗುವಿನಲ್ಲಿ ಆಜನ್ಮ ದೋಷಗಳು ಕಂಡುಬರಬಹುದು.  ಕುಮುಲು ಅವಧಿ 9-10 ದಿವಸಗಳು, ಅನಂತರ ಜ್ವರ, ಮೂಗುರಿತ ಮತ್ತು ಕಣ್ಣುರಿತ ಶುರುವಾಗುವುವು.  ನೆಗಡಿ ಮತ್ತು ಶೀತ ಉಂಟಾಗಿ ಕಣ್ಣುಗಳು ಕೆರಳಿ ಊದಿಕೊಂಡು ನೀರು ಸುರಿಯುತ್ತಿರುವುದು ಒಂದು ಸಾಮಾನ್ಯ ಹಾಗೂ ವಿಶಿಷ್ಟ ಲಕ್ಷಣ.   ಬಾಯೊಳಗೆ ನೀಲಿ ಮಿಶ್ರ ಬಿಳಿ ಚುಕ್ಕೆಗಳು ಕೆನ್ನೆಗಳ ಲೋಳೆ ಪದರದ ಮೇಲೆ ಕಂಡುಬರುತ್ತವೆ.  ಇದು ದಡಾರದ ಅತ್ಯಂತ ವಿಶಿಷ್ಟವಾದ ಲಕ್ಷಣ. ಚರ್ಮದ ಮೇಲೆ ದದ್ದುಗಳು ಕಾಣುವ ಮುಂಚೆಯೇ ಅವು ಗೋಚರವಾಗಿ ಕಣ್ಮರೆಯೂ  ಮಾಯವೂ ಆಗುವುವು.  3-4 ದಿವಸಗಳ ಅನಂತರ ಚರ್ಮದ ಮೇಲೆ ಕೆಂಪು ಚುಕ್ಕಿ ಮಿಟ್ಟೆ ದದ್ದುಗಳು, ಹಣೆ, ಕಿವಿ ಹಿಂಭಾಗದಲ್ಲಿ ಕಂಡುಬಂದು ಮುಂದಿನ ದಿನಗಳಲ್ಲಿ ಮೈಯಲ್ಲೆಲ್ಲ ಹರಡುವುವು.  ದದ್ದುಗಳ ಜೊತೆಗೆ ಜ್ವರವೂ ಹೆÀಚ್ಚಾಗುತ್ತದೆ.  2-3 ದಿವಸಗಳಲ್ಲಿ ದದ್ದುಗಳು ಒಣಗಿ ಚರ್ಮ ಪೊರೆ ಬಿಡುವುದು.

		ಬ್ರಾನ್‍ಕೈಟಿಸ್, ಬ್ರಾಂಕೊನ್ಯೂಮೋನಿಯ ಮತ್ತು ನಡುಕಿವಿಯುರಿತಗಳು ಮುಖ್ಯ ತೊಡಕುಗಳು. ದಡಾರಕ್ಕೆಂದೇ ವಿಶಿಷ್ಟ ಚಿಕಿತ್ಸೆ ಇಲ್ಲ.  ವಿಶ್ರಾಂತಿ ಮತ್ತು ಜ್ವರವಿಳಿಕೆ ಔಷಧಿಗಳ ಸೇವನೆಯೇ ದಡಾರದಲ್ಲಿ ಅನುಸರಿಸುವ ಮುಖ್ಯ ಚಿಕಿತ್ಸೆ. ತೊಡಕುಗಳು ಕಂಡುಬಂದರೆ ಪ್ರತಿಜೈವಿಕ ಔಷಧಿಗಳನ್ನು ಸೇವಿಸಬೇಕಾಗುವುದು.  ಗ್ಯಾಮ ಗ್ಲಾಬ್ಯುಲಿನ್ ನೀಡಬಹುದು. ಎಮ್‍ಎಮ್‍ಆರ್ ಲಸಿಕೆಯಿಂದ ದಡಾರವನ್ನು ತಡೆಗಟ್ಟಬಹುದು.

	ಜರ್ಮನ್ ದಡಾರ :  ವೈರಸ್ ಗುಂಪಿಗೇ ಸೇರಿದ ಇನ್ನೊಂದು ಬಗೆಯ ದಡಾರಕ್ಕಿಂತ ಕಡಿಮೆ ತೀವ್ರತೆಯ ಅಂಟು ಜಾಡ್ಯ.  ದಡಾರದಂತೆ ಕೆಮ್ಮು ಮತ್ತು ಸೀನುವುದರಿಂದ ಒಬ್ಬರಿಂದೊಬ್ಬರಿಗೆ ಪ್ರಸರಿಸುವುದು. ಬಸಿರಿನಲ್ಲಿ ಜಾಡ್ಯ ತಗಲಿದರೆ ಮೃತಶಿಶು ಜನನವಾಗಬಹುದು.  ಜೀವಂತ ಮಗು ಹುಟ್ಟಿದರೂ ಮಗುವಿನಲ್ಲಿ ಆಜನ್ಮ ದೋಷಗಳು ಕಂಡು ಬರುವುದು ಬಹು ಸಾಮಾನ್ಯ.

	ಕುಮುಲು ಅವಧಿ 18 ದಿವಸಗಳು.  ಅನಂತರ ಸ್ವಲ್ಪ ಜ್ವರ ಮತ್ತು ಮೂಗುರಿತ ಶುರುವಾಗುವುವು.  24 ಗಂಟೆಗಳ ಬಳಿಕ ಚರ್ಮದ ಮೇಲೆ ಕೆಂಪು ದದ್ದೆಗಳು ಕಂಡು 72 ಗಂಟೆಗಳೊಳಗೆ ಕಣ್ಮರೆಯಾಗುವುವು.   ಯಾವ ತೊಡಕುಗಳೂ ಸಾಮಾನ್ಯವಾಗಿ  ಉಂಟಾಗುವುದಿಲ್ಲ.  ವಿಶ್ರಾಂತಿ ಮತ್ತು ಜ್ವರವಿಳಿಕೆ ಔಷಧಿಗಳ ಸೇವನೆ ಜರ್ಮನ್ ದಡಾರದ ಚಿಕಿತ್ಸೆ. ಇದನ್ನು ನಿಯಂತ್ರಿಸಲು ಲಸಿಕೆ ಇದೆ.     
(ಕೆ.ಎಮ್.ಆರ್; ಹೆಚ್.ಎಸ್.ಎಸ್.ಎಚ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ